ನಂಜಯ್ಯ
ಕನ್ನಡ ಸಾಹಿತ್ಯದಲ್ಲಿ ನಂಜಯ್ಯ ಎಂಬ ಹೆಸರಿನ ಇಬ್ಬರು ಯಕ್ಷಗಾನ ಕವಿಗಳು ದೊರೆಯುತ್ತಾರೆ.
ಮೊದಲನೆಯವನ ಕಾಲ ಸು.1750. ಕಾಶ್ಯಪ ಗೋತ್ರದವನಾದ ಈತ ಮೂಗೂರು ಅರಸುಗಳ ವಂಶಕ್ಕೆ ಸೇರಿದವ. ಈತನ ವಂಶಪರಂಪರೆ ಹೀಗಿದೆ: ಬಾಗಿಳಿ ಕೆಂಪ ಭೂಪಾಲನ ಮಗ ವೇಶಭೂಪತಿ. ಆತನ ಮಗ ಆಹವವಿಜಯ, ಅವನ ಮಗ ಲಿಂಗರಾಜೇಂದ್ರ. ಆತನ ಮಗನೇ ಕವಿ ನಂಜಯ್ಯ.

ಈತ ಕಪೋತವಾಕ್ಯ ಮತ್ತು ಶಬರಧನಂಜಯವಿಲಾಸಮಂಜರಿ ಎಂಬೆರಡು ಯಕ್ಷಗಾನ ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಎರಡನೆಯದು ಅನುಪಲಬ್ಧ. ವಾಲ್ಮೀಕಿ ರಾಮಾಯಣದ ಸುಂದರಕಾಂಡದ ಮೂರನೆಯ ಸಂಧಿಯಲ್ಲಿ ಬರುವ ಸೂರ್ಯಕುಮಾರನಾದ ಸುಗ್ರೀವ ಶ್ರೀರಾಮನ ಬಳಿಗೆ ಬಂದು ತನ್ನ ಆಶ್ರಯ ಪಡೆದಾಗ ಶ್ರೀರಾಮ ಸುಗ್ರೀವನಿಗೆ ಹೇಳುವ ಕಪೋತಕಥೆಯೇ ಕಪೋತವಾಕ್ಯದ ವಸ್ತು.

ನಂಜಯ್ಯನೆಂಬ ಇನ್ನೊಬ್ಬ ಯಕ್ಷಗಾನ ಕವಿ ಇದ್ದುದು ಸು.1860ರಲ್ಲಿ. ಈತ ಘಟ್ಟದ ಕೆಳಗಿನವ. ಆ ಕಾಲದಲ್ಲಿ ಕರ್ನಾಟಕ ಕವಿಗಳಲ್ಲಿ ಅಗ್ರೇಸರನೆನಿಸಿ, ಯಕ್ಷಗಾನದಲ್ಲಿ ಅತುಳ ಅಭಿರುಚಿಯುಳ್ಳವನಾಗಿದ್ದ ಅಳಿಯ ಲಿಂಗರಾಜನ ಪ್ರಭಾವಕ್ಕೊಳಗಾದ ಈತ ಆತನ ಆಶ್ರಯಪಡೆದು ಮೈಸೂರಿನಲ್ಲಿ ನೆಲಸಿ ಅನೇಕ ಯಕ್ಷಗಾನ ಕೃತಿಗಳನ್ನು ರಚಿಸಿ ಜನಪ್ರಿಯನಾದ. ಮಂಜುನಾಥ ಎಂಬುದು ಈತನ ಅಂಕಿತ. ತ್ರಿಪುರದಹನ, ರಾಧಾವಿಳಾಸ, ಸೋಮಶೇಖರ-ಚಿತ್ರಶೇಖರ ಕಥೆ, ಮೋಹ-ವಿವೇಕರ ಕಾಳಗ, ಹರಿಶ್ಚಂದ್ರೋಪಾಖ್ಯಾನ, ಬಲಿಚಕ್ರವರ್ತಿಯ ಚರಿತೆ, ಸಾರಂಗಧರನ ಕಥೆ, ಚಂದ್ರಹಾಸನ ಕಥೆ-ಇವು ಇವನ ಉಪಲಬ್ಧ ಯಕ್ಷಗಾನಗಳು. ಕವಿ ಎಲ್ಲಿಯೂ ತಾನು ಇಂತಿಷ್ಟು ಕೃತಿಗಳನ್ನು ಬರೆದಿರುವುದಾಗಿ ಹೇಳಿಕೊಂಡಿಲ್ಲ.

ಈಶ್ವರ ತನ್ನ ಪಾಶುಪತಾಸ್ತ್ರದಿಂದ ತ್ರಿಪುರಗಳನ್ನು ದಹಿಸಿದ ಕಥೆ ತ್ರಿಪುರದಹನದ ವಸ್ತು. ಇದರಲ್ಲಿ ಒಟ್ಟು 321 ಪದ್ಯಗಳಿವೆ. ಇದರಲ್ಲಿ ಕವಿ ವಿವಿಧ ಛಂದಸ್ಸುಗಳನ್ನು ಬಳಸಿದ್ದಾನೆ. ಭಾಗವತದ ದಶಮಸ್ಕಂದದಲ್ಲಿ ಬರುವ ರಾಧಾಕೃಷ್ಣರ ಲೀಲಾವಿನೋದಗಳೇ ರಾಧಾವಿಲಾಸದ ವಸ್ತು. ಇದರಲ್ಲಿ ಒಟ್ಟು 241 ಪದ್ಯಗಳಿವೆ. ವಜ್ರಮಕುಟರಾಯನ ಪುತ್ರರಾದ ಸೋಮಶೇಖರ-ಚಿತ್ರಶೇಖರ ಕಥೆಯೇ ಸೋಮಶೇಖರ-ಚಿತ್ರಶೇಖರರ ಕಥೆಯ ವಸ್ತು. ಇದಕ್ಕೆ ಚೋರಕಥೆ ಎಂಬ ಇನ್ನೊಂದು ಹೆಸರೂ ಇದೆ. ವಾಮನ ಬಲಿಚಕ್ರವರ್ತಿಯಲ್ಲಿ ದಾನವನ್ನು ಬೇಡಿ ಆತನನ್ನು ಪಾತಾಳಕ್ಕೆ ತುಳಿದ ಕಥೆ ಬಲಿಚಕ್ರವರ್ತಿಯ ಕಥೆ. ಇದರಲ್ಲಿ 385 ಪದ್ಯಗಳಿವೆ. ಸಾರಂಗಧರನ ಚರಿತ್ರೆಯಲ್ಲಿ ಒಟ್ಟು 405 ಪದ್ಯಗಳಿವೆ. ಇದರಲ್ಲಿ ಸಾರಂಗಧರ ಎಂಬ ರಾಜನ ಕಥೆಯನ್ನು ವರ್ಣಿಸಲಾಗಿದೆ. ಚಂದ್ರಹಾಸನ ಕಥೆಯಲ್ಲಿ 385 ಪದ್ಯಗಳಿವೆ. ಇದರಲ್ಲಿಯೂ ಛಂದೋವೈವಿಧ್ಯವಿದೆ. ಮೋಹ ವಿವೇಕರ ಕಾಳಗ, ಹೆಸರೇ ಹೇಳುವಂತೆ ಮೋಹ ಮತ್ತು ವಿವೇಕಗಳ ಹೋರಾಟದ ವಿವರಣೆಯಾಗಿದೆ. ಅಂದರೆ, ಮನಸ್ಸಿನಲ್ಲುದಿಸಿದ ಮೋಹ ಮತ್ತು ವಿವೇಕಗಳು ರಣದಲ್ಲಿ ಕಾಳಗ ಮಾಡಿ ವಿವೇಕ ಮೋಹವನ್ನು ಗೆದ್ದಿತು ಎಂಬುದಾಗಿ ವರ್ಣಿಸಲಾಗಿದೆ. ಇದರಲ್ಲಿ ಒಟ್ಟು 637 ಪದ್ಯಗಳಿವೆ. ಹರಿಶ್ಚಂದ್ರೋಪಾಖ್ಯಾನದಲ್ಲಿ ಒಟ್ಟು 363 ಪದ್ಯಗಳಿವೆ. ಸತ್ಯಹರಿಶ್ಚಂದ್ರನ ಕಥೆ ಇದರ ವಸ್ತು.
(ಎಂ.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ